ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 7 September 2008

ಉಡುಪಿ - ಸಣ್ಣ ಪರಿಚಯ

ಉಡುಪಿಯ ಹಿಂದಿನ ಹೆಸರು - ರಜತ ಪೀಠ ಅಥವ ರೂಪ್ಯ ಪೀಠ. ಅಂದರೆ ಬೆಳ್ಳಿಯ ಮಣೆ ಎಂದು ಇದರ ಅರ್ಥ.

ಉಡುಪಿ ಬೆಳ್ಳಿಯ ಮಣೆ ಏಕಾಯಿತು? ಇದಕ್ಕೆ ಒಂದು ರ್‍ಓಚಕವಾದ ಐತಿಹ್ಯವನ್ನು ಕೃಷ್ಣಾವಧೂತ ಕವಿ ತನ್ನ ’ಮಂದಾರಮರಂದ’ ಚಂಪೂ ಕಾವ್ಯದಲ್ಲಿ ಹೀಗೆ ಹೇಳಿದ್ದಾರೆ.

ನೃಪಃ ಕಾರಯಾಮಾಸ ತಸ್ಯಾSಸನಾರ್ಥಂ
ಸುಪೀಠಂ ಸ ರೂಪ್ಯೋತ್ತರಂ ತ್ವಷ್ಟವರ್ಗಂ | - (ಬಿಂದು: ೧.೩೯)

ಭಜತಸುಜನಬಂಧೋ ಙಾನಸಿಂಧೋ ಮುದಂಧೋ
ಭವತು ಪುರವಿಧಾನಂ ರೂಪ್ಯಪೀಠಾಭಿಧಾನಮ್| - (ಬಿಂದು: ೧.೪೦)

ಈ ಪದ್ಯಗಳ ತಾತ್ಪರ್ಯ: ಈ ಪ್ರದೇಶವನ್ನು ಅಳುತ್ತಿದ್ದ ರಾಮಭೋಜರಾಜನೆಂಬವ ಒಮ್ಮೆ ವಾಜಪೇಯ ಯಾಗ ಮಾಡ ಬಯಸಿದ. ಯಾಗದಲ್ಲಿ ಸ್ವತಃ ಬಂದು ಸನ್ನಿಹಿತನಾಗುವಂತೆ ಕ್ಷೇತ್ರದೇವತೆಯಾದ ಪರಶುರಾಮನನ್ನು ಪ್ರಾರ್ಥಿಸಿದ. ಪರಶುರಾಮನು ಕರೆಗೆ ಒಪ್ಪಿ ಯಾಗಮಂಟಪಕ್ಕೆ ಬಂದಾಗ ಅವನನ್ನು ಬೆಳ್ಳಿಯ ಮಣೆ(ರಜತ ಪೀಠ) ಯಲ್ಲಿ ಕೂಡಿಸಿ ಸತ್ಕರಿಸಿದ. ಈ ಅಪೂರ್ವ ಘಟನೆಯ ನೆನಪಿಗಾಗಿ ಈ ಪ್ರದೇಶಕ್ಕೆ ’ರಜತ ಪೀಠ’ ಎಂದೇ ಹೆಸರಾಯಿತು.

ಈ ಪ್ರದೇಶದ ಇನ್ನೊಂದು ಹೆಅರು "ಒಡಿಪು:" ೧೪ನೇ ಶತಕದ ಗ್ರಂಥಕಾರ ನಾರಯಣ ಪಂಡಿತರು "ರಜತಪೀಠಪುರವನ್ನು ಆಡುಮಾತಿನಲ್ಲಿ ’ಒಡಿಪು’ ಎಂದು ಕರೆಯುತ್ತಾರೆ" ಎಂದು ಹೇಳುತ್ತಾರೆ.

ತುಳುವಿನ ಒಡಿಪು ಕನ್ನಡದವರ ಬಾಯಲ್ಲಿ ಉಡಪು, ಉಡುಪು, ಉಡಿಪಿ, ಉಡುಪಿ ಎಂದೆಲ್ಲಾ ಅಯಿತು. ಹಳೆ ಕೀರ್ತನೆಗಳಲ್ಲಿ ’ಉಡಪಿನ ಕೃಷ್ಣ’ ಉಡುಪಿನ ಕೃಷ್ಣ’ ಎಂದೆಲ್ಲಾ ಪ್ರಯೋಗಗಳಿವೆ. ಇದು ಇಂಗ್ಲಿಷ್ ಹವೆ ಬೀಸಿದ ನಾಲಗೆಯಲ್ಲಿ ಉಡಿಪಿ ಅಯಿತು. ಮತ್ತೆ ಪುನಃ ಉಡುಪಿ ಅಯಿತು. ಇವೆಲ್ಲವೂ ’ಒಡಿಪು’ ಮೂಲ ಶಬ್ದದ ವಿಕೃತ ರೂಪಗಳೆ.

ಕೃಷ್ಣ ಹೇಗೆ ಬಂದ:

ಉಡುಪಿಯ ಕೃಷ್ಣನ ಇತಿಹಾಸವು ಜನರ ಬಾಯಲ್ಲಿ ರೂಪಾಂತರಗೊಂಡಿದೆ. ಗೋಪಿಚಂದನದ ಗಡ್ಡೆಯಲ್ಲಿ ಮರೆಯಾದ ಕೃಷ್ಣನ ವಿಗ್ರಹವನ್ನು ಹೊತ್ತು ತರುತ್ತಿದ್ದ ದೋಣಿ ಮಲಪೆಯ ಬಳಿ ಬರುತ್ತಿರುವಾಗ ಬಿರುಗಾಳಿಗೆ ತತ್ತರಿಸಿತು; ಆಚಾರ್ಯ ಮಧ್ವರು ತನ್ನ ಕಾವಿ ಬಟ್ಟೆ ಬೀಸಿ ಬಿರುಗಾಳಿಯನ್ನು ಶಾಂತಗೊಳಿಸಿ ದೋಣಿಯನ್ನು ದಡಮುಟ್ಟಿಸಿದರು ಎಂಬೊಂದು ಕಥೆ ಈಗ ಪ್ರಚಲಿತವಿದೆ.

ಆದರೆ ಸುಮಾರು ೧೭ನೆಯ ಶತಮಾನದಲ್ಲಿ ಫಲಿಮಾರು ಮಠದ ಅಧಿಪತಿಗಳಾಗಿ ಶ್ರೀಕೃಷ್ಣ ಪೂಜಕರಾಗಿದ್ದ ರಘವರ್ಯತೀರ್ಥರೆ ಬರದಿಟ್ಟ ದಾಖಲೆಯಲ್ಲಿ ಈ ಘಟನೆಯನ್ನು ಹೀಗೆ ನಿರೂಪಿಸಿದ್ದಾರೆ:

ಕೃಷ್ಣ ವಿಗ್ರಹವಿದ್ದ ಗೋಪಿಯ ಗಡ್ಡೆಯನ್ನು ಹೊತ್ತ ಹಡಗು ದ್ವಾರಕೆಯಿಂದ ಹೊರಟು ಮಲಪೆಯ ಬಳಿ ಬರುತಿತ್ತು. ಆಗ ನಡೆದ ದುರಂತದಲ್ಲಿ ದೋಣಿ ಒಡೆದು ಮುಳುಗಿ ಹೋಯಿತು. ಜತೆಗೆ ಕೃಷ್ಣ ವಿಗ್ರಹವೂ ಕಡಲತಳ ಸೇರಿತು. ಆನಂತರ ಅದನ್ನು ತಿಳಿದ ಆಚಾರ್ಯ ಮಧ್ವರು ಕಡಲ ತಳದಿಂದ ಅ ಪ್ರತಿಮೆಯನ್ನು ತಂದು ಉಡುಪಿಯ ಮಠದಲ್ಲಿ ಸ್ಥಾಪಿಸಿದರು.

ಪ್ಲವೆ ಭಿನ್ನೆ ಜಲಧೌ ಮಗ್ನಾಂ ಶ್ರೀಕೃಷ್ಣಪ್ರತಿಮಾಮಾನೀಯ.....|

ಇತಿಹಾಸಿಕವಾಗಿ ಹೆಚ್ಚು ಪ್ರಾಚೀನವು ಅಧಿಕೃತವು ಆಗಿದೆ. ಬಿರುಗಾಳಿಯ ಕಥೆ ಆನಂತರ ಬೆಳೆದುಬಂದದ್ದು. ಸ್ಥಳಪುರಾಣ ಕಟ್ಟಿ ಬೆಳೆಸುವುದರಲ್ಲಿ ನಮ್ಮ ದೇಶದ ಜನ ಅಗ್ರಗಣ್ಯರಲ್ಲವೆ?

ಕೃಷ್ಣನ ರಥಗಳು:

ಕೃಷ್ಣನಿಗೆ ನಿತ್ಯವು ಒಂದಲ್ಲ ಒಂದು ಉತ್ಸವ. ಅದಕ್ಕಾಗಿ ಮೂರು ಮರದ ತೇರುಗಳು. ಒಂದು ಬೆಳ್ಳಿಯ ತೇರು. ಇನ್ನೊಂದು ಚಿನ್ನದ ತೇರು. ಒಂದು ಬೆಳ್ಳಿಯ ಪಾಲಕಿ, ಮತ್ತೊಂದು ಚಿನ್ನದ ಪಾಲಕಿ.

ಮೂರು ರಥಗಳದು ಮೂರು ಗಾತ್ರ. ದೊಡ್ಡದು ಬ್ರಹ್ಮರಥ; ನಡುವಿನದು ಗರುಡರಥ; ಇನ್ನೊಂದು ಚಿಕ್ಕರಥ.

ಸುಮಾರು ೫೦ ಅಡಿ ಎತ್ತರದ ಬ್ರಹ್ಮರಥ ತೊನೆಯತ್ತ ಸಾಗುವದನ್ನು ನೋಡುವುದೆ ಒಂದು ಆನಂದ.

ಉಡುಪಿಯ ಎಲ್ಲ ಉತ್ಸವಗಳಿಗೆ ಶಿಖರಪ್ರಾಯವಾದದ್ದು "ಪರ್ಯಾಯ ಮಹೋತ್ಸವ". ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಉತ್ಸವ ತನ್ನದೇ ಆದ ಕೆಲವು ವ್ಯೆಶಿಷ್ಠ್ಯಗಳನ್ನು ಒಳಗೊಂಡಿದೆ. ಸುಮಾರು ಐದುವರೆ ಶತಕಗಳಿಂದ ಈ ಪರ್ಯಾಯ ಜಾತ್ರೆ ಉಡುಪಿಯ ಹೆಗ್ಗಳಿಕೆಯ ಜಾತ್ರೆಯಾಗಿ ನಡೆದುಕೊಂಡು ಬರುತಿದೆ.

ಕನಕದಾಸರು ಬಂದಾಗ ಏನಾಯಿತು?

ಕನಕದಾಸರು ಉಡುಪಿಯಲ್ಲಿ ಇತಿಹಸ ನಿರ್ಮಿಸಿದರು. ಕನಕದಾಸರ ಕಥೆಯನ್ನು ಬಿಟ್ಟು ಬಿಟ್ಟರೆ ಉಡುಪಿಯ ಕಥೆ ಅಪೂರ್ಣವಾಗಿ ಬಿಡುತ್ತದೆ.

ಕನಕದಾಸರ ಪ್ರಸಂಗದಲ್ಲು ಅನೇಕ ದಂತ ಕಥೆಗಳು ಸೇರಿಕೊಂಡು ನಾನಾ ರೂಪ ತಾಳಿ ವಸ್ತು ಸ್ಥಿತಿ ತಲೆಮರೆಸಿಕೊಂಡಿದೆ. ಕನಕದಾಸರ ಉಡುಪಿಯ ಸಂದರ್ಶನಕ್ಕೆ ಸಂಬಧಪಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಮಗೆ ದೊರುಕುವ ವಿವರ ಇಷ್ಟು.

ಕನಕದಾಸರು ಕ್ಶೇತ್ರಯಾತ್ರೆಯ ಪ್ರಸಂಗದಲ್ಲಿ ಉಡುಪಿಗೂ ಬಂದಿದ್ದರು. ವಾದಿರಾಜರು ಉಡುಪಿಯಲ್ಲಿದ್ದ ಕಾಲ. ಪ್ರಾಯಃ ಅವರ ಪರ್ಯಾಯ ಕಾಲ ಕೃಷ್ಣಗುಡಿಯ ಎದರುಗಡೆ - ಈಗ ಕನಕದಾಸ ಮಂಟಪ ಇರುವಲ್ಲಿ - ಜೋಪಡಿ ಕಟ್ಟಿಕೊಂಡು ವಾಸವಾಗಿದ್ದರು. ಚಂದ್ರಶಾಲೆಯ ಅಡ್ಡಗೋಡೆಯಿಂದಾಗಿ - ಕೃಷ್ಣನ ಎದುರೆ ನಿಂತರು ಹೊರಗಣ್ಣಿಗೆ ಕೃಷ್ಣನ ದರ್ಶನವಿಲ್ಲ. ಕನಕದಾಸರ ಒಳಗಣ್ಣು ತೆರೆದಿತ್ತು. ಅಲ್ಲಿ ಮಾತ್ರ ನಿರಂತರ ಕೃಷ್ಣನ ದರ್ಶನ.

ಒಂದು ದಿನ ರಾತ್ರಿ ಉಡುಪಿಯಲ್ಲಿ ಚಿಕ್ಕ ಭೂಕಂಪವಾಯಿತಂತೆ, ಚಂದ್ರಶಾಲೆಯ ಗೋಡೆ ಕೃಷ್ಣನ ನೇರಕ್ಕೆ ಬಿರುಕುಬಿಟ್ಟಿತಂತೆ. ಈ ಬಿರುಕಿನಲ್ಲಿ ಇಣುಕಿದರೆ ಕನಕದಾಸರಿಗೆ ರಸ್ತೆಯಲ್ಲೆ ಕೃಷ್ಣನ ದರ್ಶನ. ಇದರ ನೆನಪಿಗಾಗಿ ವಾದಿರಾಜರು ಇ ಬಿರುಕುಬಿಟ್ಟ ಜಾಗವನ್ನು ಮುಚ್ಚುವ ಬದಲು ಅಲ್ಲೊಂದು ಕಿಂಡಿಯನ್ನಿಡಿಸಿದರು. ಅದೇ ಈಗಣ ಕನಕನ ಕಿಟಿಕಿ.

ಕನದಾಸರಿಗೆ ದರ್ಶನ ನೀಡಲು ಕೃಷ್ಣ ತಿರುಗಿದ ಎನ್ನುವ ಕಥೆ ಅನಂತರ ಸ್ತಳಪುರಾಣದ ಚಪಲಚಿತ್ತರಿಂದ ನಿರ್ಮಾಣಗೊಂಡ ಕಥೆ. ಕೃಷ್ಣನವಿಗ್ರಹವನ್ನು ಮಧ್ವಾಚಾರ್ಯರು ಪಶ್ಚಿಮಾಭಿಮುಖವಾಗಿಯೇ ಪ್ರತಿಷ್ಠೆ ಮಾಡಿದ್ದರು ಎನ್ನುವುದಕ್ಕೆ ದಾಖಲೆಗಳಿವೆ. ಮಠದ ವಾಸ್ತುವನ್ನು ಪರಿಶೀಲಿಸಿ ನೋಡಿದರೆ ಅಲ್ಲಿ ಪೂರ್ವಾಭಿಮುಖವಾಗಿ ಪ್ರತಿಷ್ಠೆ ಮಾಡುವ ಸಾಧ್ಯತೆಯೆ ಇಲ್ಲ.

No comments: