ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Thursday, 27 November 2008

ಪಾಜಕ

ಪಾಜಕ ಕ್ಷೇತ್ರ ಅತ್ಯಂತ ಪವಿತ್ರ ಕ್ಷೇತ್ರ. ಕರ್ಮ ಭೂಮಿ ಭಾರತದಲ್ಲಿ ಇದರಂತೆ ಹಿರಿಮೆ ಮತ್ತೆ ಎಲ್ಲೂ ಕಾಣಬರುವುದಿಲ್ಲ. ಪುರಾಣಗಳಲ್ಲಿ ವರ್ಣಿತವಾದ ಪುರಾತನ ಕ್ಷೇತ್ರವಿದು.

ಙಾನಿಗಳಿಗೆ ಙಾನ ಕ್ಷೇತ್ರ, ಸುಮಂಗಲ ಸ್ತ್ರೀಯರಿಗೆ ಸೌಭಾಗ್ಯದ ಮಂಗಲ ಕ್ಷೇತ್ರ,
ನಲಿದಾಡುವ ವಟುವ್ರುಂದಕ್ಕೆ (ಬ್ರಹ್ಮಚಾರಿಗಳಿಗೆ) ಆಕರ್ಷಿಸುವ ಸುಂದರ ಕ್ಷೇತ್ರ,
ಸೌಂದರ್ಯದ ಸವಿ ಸವಿಯುವವರಿಗೆ ಚಿತ್ರ, ವಿಚಿತ್ರಗಳಿಂದ ಕೂಡಿದ ಕ್ಷೇತ್ರ,
ತಪಸ್ವಿಗಳ ಸಾಧನೆಗೆ ದಿವ್ಯ ಕ್ಷೇತ್ರ,
ಜಪ, ತಪ, ಚಿಂತನೆಗಳಿಗೆ ಪ್ರಣವ ಕ್ಷೇತ್ರ,
ಹೀಗೆ ಸಕಲ ಸಾಧನ ಸುಜೀವಿಗಳ ಸಾಧನೆಗೆ ಮೂಲಗೋತ್ರ ಕಾರಣ - ಇದು ನಮ್ಮ ಕುಲ ಗುರು ಕ್ಷೇತ್ರ.

ಪರಶುರಾಮ ಕ್ಷೇತ್ರ:

ಇಪ್ಪತ್ತೊಂದು ಸಲ ಭೂಮಂಡಲದಲ್ಲಿ ದುಷ್ಟ ಕ್ಷತ್ರಿಯರನ್ನು ಕ್ರೋಧಾಗ್ನಿಯಿಂದ ಭಸ್ಮಗೊಳಿಸಿ, ಸಮಸ್ತ ಪ್ರುಥಿವಿಯನ್ನು ಬ್ರಾಹ್ಮರಣರಿಗೆ ದಾನ ಮಾಡಿದ ನಂತರ ಶ್ರೀ ಪರಶುರಾಮ ದೇವರು ಇಲ್ಲಿ ಇರಲು ಬಯಸಲಿಲ್ಲ. ತಾನು ದಾನ ನೀಡಿದ ಸ್ಥಳದಲ್ಲಿ ತಾನೆ ಇರುವುದು ಹೇಗೆ ಸಮಂಜಸ ? ಎಂದು ಆಲೋಚಿಸಿ ಕೂಡಲೇ, ತನ್ನ ಬಾಣವನ್ನು ಪ್ರಯೋಗಿಸಿ ಸಮುದ್ರವನ್ನು ದೂರಸರಿಸಿ, ತನ್ನ ಕ್ಷೇತ್ರವನ್ನು ಸ್ಥಾಪಿಸಿದನು. ಇದೆಲ್ಲಾ ಭಗವಂತನ ಲೀಲೆ, ವಾಸ್ತವಿಕವಾಗಿ ಸಮುದ್ರದಲ್ಲಿ ಅವಿತಿರುವ ದುಷ್ಟ ದ್ಯೆತ್ಯರನ್ನು ನಾಶ ಮಾಡುವ ಉದ್ದೇಶದಿಂದ ಸಮುದ್ರವನ್ನು ಹಿಂದೆ ಕಳುಹಿಸಿದನು. ಹಾಗೆಯೇ ದ್ಯೆತ್ಯರನ್ನು ಸಂಹರಿಸಿದನು. ಹೀಗೆ ಈ ಕ್ಷೇತ್ರವು ಉಗಮವಾಯಿತು (ಕರ್ನಾಟಕದಲ್ಲಿ ಇರುವ ನಮ್ಮ ದಕ್ಷಿಣಕನ್ನಡ ಭಾಗ). ಇದನ್ನು ಹೊರತು ಪಡಿಸಿ ಎಲ್ಲವೂ ಶ್ರೀರಾಮನ ಕ್ಷೇತ್ರವಾದರೆ, ಇದು ಪರಶುರಾಮ ಕ್ಷೇತ್ರ. ಪರಶುರಾಮರೂಪಿ ಪರಮಾತ್ಮನು ತನಗಾಗಿ ಈ ಕ್ಷೇತ್ರವನ್ನು ನಿರ್ಮಿಸಿದನು ಎನ್ನುವುದಕಿಂತ, ಇದು ತನ್ನವರಿಗಾಗಿ ಭಗವಂತ ಕರುಣಿಸಿದ ಪವಿತ್ರ ಕ್ಷೇತ್ರ.

ಪಾಜಕವು ಪರಶುರಾಮ ಸೃಷ್ಟಿಸಿದ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರ ಮತ್ತು ಪರಶುರಾಮರಿಗೆ ಅತ್ಯಂತ ಪ್ರಿಯವಾದ ಕ್ಷೇತ್ರ.

ಪಾಜಕ ಅಂದರೇನು ?

ಜನನವಿಲ್ಲದ ಜಗತ್ ಪಾಲಕನಿಂದ ಕಲ್ಲಿನ ಮಧ್ಯದಲ್ಲಿ ಹಿಂಗದ ನೀರನ್ನು ಹೊಂದಿದ ಕ್ಷೇತ್ರಕ್ಕೆ ಈ ಹೆಸರು.
ಪಾಜಕ ಪದವನ್ನು ಬಿಡಿಸಿ ತಿಳಿಸಿದ ಅರ್ಥವಿದು.

ಪಾಜಕ ಎಂಬಲ್ಲಿ ’ಪ + ಆಜ + ಕ’ ಎಂದು ಮೂರು ಪದಗಳಿವೆ.

’ಪ’ = ಜಗತ್ ಪಾಲಕನಾದ
’ಆಜ’ = ಜನನವಿಲ್ಲದವನು (ಅರ್ಥಾತ್ ಭಗವಂತ)
’ಕ’ = ನೀರು ಹೊಂದಿರುವುದೆಂದು

ಪರಶುರಾಮನ ತೀರ್ಥಗಳು:

ಇಲ್ಲಿ ಆ ಭಗವಂತನು ಮಾಡಿದ ನಾಲ್ಕು ತೀರ್ಥಗಳು ಕಾಣಸಿಗುತ್ತವೆ.

ಪರಶು ತೀರ್ಥ: ಭೃಗು ಕುಲದಲ್ಲಿ ಜನಿಸಿದ (ಪರಶುರಾಮ) ಪರಮಾತ್ಮನ ಪ್ರಾಧನ ಅಯುಧ ಪರಶು, ಅದರಿಂದ ಉದ್ಭವಿಸಿದ ತೀರ್ಥ ’ಪರಶು ತೀರ್ಥ’. ನಾಲ್ಕೂ ತೀರ್ಥಗಳಲ್ಲಿ ಮೊದಲು ಉದಯಿಸಿದ ತೀರ್ಥ.

ಧನುಸ್ ತೀರ್ಥ: ದಕ್ಷಿಣ ದಿಕ್ಕಿನಲ್ಲಿ ತನ್ನ ಅದ್ಭುತ ಬಿಲ್ಲನ್ನು ಇಡುತ್ತಿದಂತೆ ಉದಯಿಸಿದ ತೀರ್ಥ ’ಧನುಸ್ ತೀರ್ಥ’

ಗದಾ ತೀರ್ಥ: ಪಶ್ಚಿಮದಲ್ಲಿ ತನ್ನ ಗದಾ ಪ್ರಹಾರದಿಂದ ನಿರ್ಮಿಸಿದ ತೀರ್ಥ ’ಗದಾ ತೀರ್ಥ’

ಬಾಣ ತೀರ್ಥ: ಉತ್ತರದಿಕ್ಕಿನ ಭೂತಲದಲ್ಲಿ ಪರಶುರಾಮ ದೇವರು ಅರ್ಧಚಂದ್ರಾಕಾರದ ತನ್ನ ಬಾಣವನ್ನು ಪ್ರಯೋಗಿಸುತಿದ್ದಂತೆ, ಅದು ಗಂಗಾ ನದಿಯನ್ನು ಹೊಂದಿ ಅದರೊಟ್ಟಿಗೆ ಹಿಂತಿರುಗಿ ಬಂದು ಬಾಣ ತೀರ್ಥವೆಂದೆನಿಸಿತು.

ದಕ್ಷಿಣದ ನಂದಗೋಕುಲ:

ಹೌದು. ಪಾಜಕ ಕ್ಷೇತ್ರ ದಕ್ಷಿಣದ ನಂದಗೋಕುಲ. ಪರಬ್ರಹ್ಮ ವಾಸುದೇವನ ಸಾಕ್ಷಾತ್ ಪ್ರತಿಬಿಂಬರಾದ ಶ್ರೀ ವಾಯುದೇವರು ಇಲ್ಲಿ ’ವಾಸುದೇವ’ ಎಂದೇ ಅವತರಿಸಿದರು. ಶ್ರೀ ವಾಯುದೇವರ ಈ ಬಾಲಲೀಲೆಯನ್ನು ಕಣ್ಣಿನಿಂದಲೂ ಅನುಭವಿಸಲು ಅನುವಾಗುವಂತೆ, ಕೆಲವು ಕುರುಹುಗಳು ಇನ್ನೂ ಜೀವಂತವಾಗಿರುವುದು ನಮ್ಮ ಪರಮಭಾಗ್ಯವು.

ತಿಂತ್ರಿಣೀ (ಹುಣಸೆ) ವೃಕ್ಷ:

ಒಮ್ಮೆ ವಾಸುದೇವರು ಆಟದ ನಂತರ ತಮ್ಮ ತಂದೆಯನ್ನು ಭೋಜನಕ್ಕಾಗಿ ಕರೆದರು. ಆದರೆ ಅವರಿಗೆ ಎತ್ತುಗಳನ್ನು ಮಾರಾಟ ಮಾಡಿದ್ದ ಒಬ್ಬ ಧನಿಕನು ಮನೆಯಲ್ಲಿ ಧರಣಿ ಕುಳಿತಿದ್ದನು. ಮಧ್ಯಗೇಹ ಭಟ್ಟರು ತನಗೆ ನೀಡಬೇಕಾದ ಹಣವನ್ನು ಕೊಡದೆ, ’ನಾನು ತಿನ್ನುವುದಿಲ್ಲ ನಿಮ್ಮಗೂ ತಿನ್ನಲು ಬಿಡುವುದಿಲ್ಲ’ ಎಂದು ಧೃಢವಾಗಿ ನುಡಿದಿದ್ದನು.

ಆಗ ವಾಸುದೇವರೂಪಿಯಾದ ವಾಯುದೇವರು ತಾವು ಆಟವಾಡುವ ಹುಣಸೆ ಬೀಜಗಳನ್ನು ತಂದು, ’ಕೊಡಬೇಕಾದ ಹಣದ ಬದಲಿ ನಾನಿದನ್ನು ನೀಡುವೆ’ ಎಂದು ಕೊಟ್ಟರು. ಆಗ ಆ ಧನಿಕನು ಚೆಂದದ ಮುದ್ದಾದ ಮೊಗದ ವಾಸುದೇವರನ್ನು ಕಂಡು ಆನಂದದಿಂದ ಆ ಬೀಜಗಳನ್ನು ಆದರಿಸಿ ತೆಗೆದುಕೊಂಡು ಹೋದನು. ಮನೆಗೆ ತಲುಪಿ ಆ ಬೀಜಗಳನ್ನು ನೋಡಿದಾಗ ಅದು ಬಂಗಾರವಾಗಿತ್ತು. ಸ್ವಲ್ಪ ಸಮಯದ ನಂತರ ಮಧ್ಯಗೇಹ ಭಟ್ಟರು ಹಣ ಹಿಂದಿರುಗಿಸಲು ಹೋದಾಗ, ಆಗ ಧನಿಕನು ತನಗೆ ಬರಬೇಕಾದ ಹಣ ಬಂದಾಯಿತು ಎಂದು ತಿಳಿಸಿದನು.

ಹೀಗೆ ಅದ್ಭುತವಾದ ಈ ಬೀಜಗಳನ್ನು ನೀಡಿದ ಸ್ಥಳದಲ್ಲಿ, ಈ ಸಂಗತಿಯು ನೆನಪಿಸುವಂತೆ ಇರುವ ವೃಕ್ಷವಿದು.

ಹೀಗೆ, ಮುಂತಾದ ಸ್ಥಳಗಳಾದ: ಅಕ್ಷರಾಭ್ಯಾಸ ಶಿಲೆ, ಹಾಲು ಮೊಸರಿಗೆ ಕಲ್ಲಿನ ಮುಚ್ಚಳ, ವಾಸುದೆವ ತೀರ್ಥ, ವಟ ವೃಕ್ಷ, ಮಣಿಮಂತನ ವಧ ಸ್ಥಳ, ಶ್ರೀ ವಾಯುದೇವರ ಬಾಲ್ಯದ ಕುರುಹುಗಳನ್ನು ನೆನಪಿಸುತ್ತವೆ.

ಇಂತ ಪವಿತ್ರ ಕ್ಷೇತ್ರಕ್ಕೆ ನಮ್ಮೆಲ್ಲರ ಜೀವಮಾನದಲ್ಲಿ ಒಮ್ಮೆ ಭೇಟಿ ಕೊಟ್ಟು, ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗೋಣ.

ಹೋಗೋಣವೇ ???

No comments: